ಬಂಗಾರಪೇಟೆ: ಹಳೆ ರೈಲ್ವೆ ಗೇಟ್ ತೆರೆಯಲು ಆಗ್ರಹ
ಪ್ರಜಾವಾಣಿ ವಾರ್ತೆ Updated:
16 ಜುಲೈ 2021, 09:27 IST
ಅಕ್ಷರ ಗಾತ್ರ :ಆ |ಆ |ಆ
ಬಂಗಾರಪೇಟೆ: ಪಟ್ಟಣದ ಪಶ್ಚಿಮ ರೈಲ್ವೆ ವಸತಿಗೃಹದ ಬಳಿ ಪಟ್ಟಣ-ಕೋಲಾರ ರೈಲ್ವೆ ಮಾರ್ಗದಲ್ಲಿರುವ ಹಳೆ ರೈಲ್ವೆಗೇಟ್ ತೆರೆದು ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಸಾಮೂಹಿಕ ನಾಯಕತ್ವದ ರೈತ ಸಂಘದ ಪದಾಧಿಕಾರಿಗಳು ರಸ್ತೆಗೆ ಮುಳ್ಳುಬೇಲಿ ಹಾಕಿ ಪ್ರತಿಭಟಿಸಿದರು.
ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಳಸೇತುವೆ ನಿರ್ಮಾಣ ಕೂಡ ಅವೈಜ್ಞಾನಿಕವಾಗಿದೆ. ರೈಲ್ವೆ ಹಳಿ ಪಕ್ಕ ಮುಳ್ಳುತಂತಿ ಬೇಲಿ ಅಳವಡಿಸದೆ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ. ಅಲ್ಲದೆ ತಮಗೆ ಇಷ್ಟ ಬಂದಂತೆ ರಾತ್ರೋರಾತ್ರಿ ಕೆಲ ರೈಲ್ವೆ ಗೇಟ್‌ಗಳನ್ನು ಮುಚ್ಚಿ ಬೇರೆಡೆ ತೆರೆಯುವ ಉದ್ದೇಶವೇನು ಎಂದು ಹೋರಾಟದ ನೇತೃತ್ವವಹಿಸಿದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಪ್ರಶ್ನಿಸಿದರು.
ಬೂದಿಕೋಟೆ ಕ್ರಾಸ್‌ನಿಂದ ಟೋಲ್‌ಗೇಟ್‌ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯಲ್ಲಿ ದೊಡ್ಡ ಹಳ್ಳಗಳು ಸೃಷ್ಟಿಯಾಗಿವೆ. ಮಳೆ ಬಿದ್ದರೆ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ. ಅಪಘಾತಗಳು ಸಾಮಾನ್ಯವಾಗಿದೆ ಎಂದರು.
ಜಿಲ್ಲಾ ಅಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ, ರೈಲ್ವೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಸ್ತೆ ಪಕ್ಕ ವಾಸ ಮಾಡುವ ಬಡವರಿಗೆ ತೊಂದರೆಯಾಗಿದೆ. ವಾಹನಗಳ ಸಂಚಾರದಿಂದ ದೂಳು ಶರೀರಕ್ಕೆ ಸೇರಿ ಹಲ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ರೈಲ್ವೆ ಗೇಟ್ ಸ್ಥಳಾಂತರ ಮಾಡಿರುವುದರಿಂದ ಒಂದು ಕಿ.ಮೀ ಸುತ್ತಿಬರುವ ಅನಿವಾರ್ಯವಿದೆ ಎಂದು ದೂರಿದರು.
ರಸ್ತೆ ತೀರ ಇಕ್ಕಟ್ಟಾಗಿದೆ. ಎರಡೂ ಬಾರಿ ವಾಹನಗಳು ಎದುರಾದರೆ ಸಂಚರಿಸಲು ಕಷ್ಟಸಾಧ್ಯ. ಆ ಸಂದರ್ಭದಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಲ್ಲುತ್ತವೆ. ನಿತ್ಯ ಸಮಸ್ಯೆ ಎದುರಿಸುತ್ತಿದ್ದರೂ ರೈಲ್ವೆ ಅಧಿಕಾರಿಗಳ ಯಾವುದೇ ಕ್ರಮ ಕೈಗೊಂಡಿಲ್ಲ. ಹಳೆ ರೈಲ್ವೆ ಗೇಟ್ ತೆರೆದು ಯಥಾಸ್ಥಿತಿ ಮುಂದುವರಿಸುತ್ತೇವೆ ಎಂದು ಭರವಸೆ ಕೊಟ್ಟ ಸಂಸದ ಹಾಗೂ ಶಾಸಕರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ರೈಲ್ವೆ ಅಧಿಕಾರಿಗಳು ನ್ಯಾಯ ಕೇಳಲು ಹೋದರೆ ದೆಹಲಿಯಲ್ಲಿ ಕೇಸು ದಾಖಲು ಮಾಡುವ ಭಯ ಹುಟ್ಟಿಸುತ್ತಾರೆ. ಕೇಂದ್ರ ಸರ್ಕಾರದ ಹೆಸರಿನಲ್ಲಿ ಜನ ವಿರೋಧಿ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಹಳೆ ರೈಲ್ವೆ ಗೇಟ್ ತೆರೆದು ಜನರಿಗೆ ಅನುಕೂಲ ಮಾಡಬೇಕು ಎಂದು
ಆಗ್ರಹಿಸಿದರು.
ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದೇ ಹೋದರೆ ಜಾನುವಾರು, ಮುಳ್ಳಿನ ಬೇಲಿಯೊಂದಿಗೆ ರೈಲ್ವೆ ಸ್ಟೇಷನ್‌ಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಶಿರಸ್ತೇದಾರ್ ಚಂದ್ರಶೇಖರ್ ಹಾಗೂ ರೈಲ್ವೆ ಇಲಾಖೆ ಅಧಿಕಾರಿ ಸಾಯಿ ಭಾಸ್ಕರ್, ಸಂಬಂಧಪಟ್ಟ ಸಚಿವರಿಗೆ ಮನವಿ ರವಾನಿಸಲಾಗುವುದು. ಈ ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಮರಗಲ್ ಮುನಿಯಪ್ಪ, ಚಾಂದ್ ಪಾಷಾ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಜಾವೀದ್, ಗೌಸ್, ಗುಲ್ಲಟ್ಟಿ, ಮಾಸ್ತಿ ಹರೀಶ್, ಸಂದೀಪ್, ಯಲ್ಲಪ್ಪ, ಮಂಗಸಂದ್ರ ತಿಮ್ಮಣ್ಣ, ಬಾಬಾಜಾನ್, ಮೊಹಮ್ಮದ್ ಶೋಹಿಬ್, ಸಲೀಂ, ರಿಜ್ವಾನ್
ಹಾಜರಿದ್ದರು.