comparemela.com


ಶೇ 30ರಷ್ಟು ವಿದ್ಯಾರ್ಥಿಗಳಿಗೆ ತಲುಪದ ಬೋಧನೆ
ಎಸ್ಸೆಸ್ಸೆಲ್ಸಿ: ಪಾಠ ಕೇಳದಿದ್ದರೂ ಪರೀಕ್ಷೆ ಅನಿವಾರ್ಯ
ರೇವಣ್ಣ ಎಂ. Updated:
13 ಜುಲೈ 2021, 08:53 IST
ಅಕ್ಷರ ಗಾತ್ರ :ಆ |ಆ |ಆ
ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇದ್ದು, ವ್ಯವಸ್ಥಿತವಾಗಿ ಮತ್ತು ಸುರಕ್ಷಿತವಾಗಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಕಸರತ್ತು ನಡೆಸುತ್ತಿದೆ. ಕಳೆದ ಬಾರಿ ‘ಬಿ’ ಗ್ರೇಡ್‌ಗೆ ತೃಪ್ತಿಪಟ್ಟಿದ್ದ ಜಿಲ್ಲೆ, ಈ ಬಾರಿ ‘ಎ’ ಗ್ರೇಡ್‌ ಪಡೆಯುವ ಪ್ರಯತ್ನದಲ್ಲಿ ತೊಡಗಿದೆ.
ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಲು ಕೋವಿಡ್‌–19 ಕಾರಣ ಆನ್‌ಲೈನ್‌ ಬೋಧನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಮಧ್ಯೆ, ಗ್ರಾಮೀಣ ಭಾಗದ ಶೇ 30ರಷ್ಟು ಮಕ್ಕಳು ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಿದ್ದು, ಪರೀಕ್ಷೆ ಎದುರಿಸಲೇಬೇಕಾದ ಅನಿವಾರ್ಯದಲ್ಲಿದ್ದಾರೆ.
ಪಾಠ ತಲುಪಿಸುವುದೇ ಸಮಸ್ಯೆ: ‘ಮಕ್ಕಳನ್ನು ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕಿಂತ ಆನ್‌ಲೈನ್‌ ಪಾಠದ ಮೂಲಕ ತಲುಪುವುದು ದೊಡ್ಡ ಸಮಸ್ಯೆಯಾಗಿದೆ. ಬಹುತೇಕ ಮಕ್ಕಳ ಮನೆಗಳಲ್ಲಿ ಮೊಬೈಲ್‌ ಫೋನ್‌ ಇರಲಿಲ್ಲ. ಇದ್ದರೂ ಅವರಲ್ಲಿ ವಾಟ್ಸ್‌ಆ್ಯಪ್‌ ಇರಲಿಲ್ಲ. ಶೇ 35 ಮಕ್ಕಳಲ್ಲಿ ಮಾತ್ರ ಈ ಸೌಲಭ್ಯ ಇತ್ತು. ಮಕ್ಕಳ ಪೋಷಕರನ್ನು ಮನವೊಲಿಸಿದ್ದರಿಂದ ಮೊಬೈಲ್‌ ಖರೀದಿಸಿ ವಿದ್ಯಾರ್ಥಿಗಳಿಗೆ ನೆರವಾದರು’ ಎನ್ನುತ್ತಾರೆ ಗ್ರಾಮೀಣ ಭಾಗದ ಶಿಕ್ಷಕರು.
ಹಲವು ಪೋಷಕರು ದಿನಗೂಲಿ ಮಾಡಿಕೊಂಡು ತುತ್ತಿನ ಚೀಲ ತುಂಬಿಸುತ್ತಿದ್ದರು. ಅಂಥವರಿಗೆ ನೆರವಾಗಲು ಅಕ್ಕಪಕ್ಕದ ಮನೆಯವರಲ್ಲಿದ್ದ ಮೊಬೈಲ್‌ ಮೂಲಕ ಸಂಪರ್ಕಿಸಬೇಕಾದ ಅನಿವಾರ್ಯ ಇತ್ತು ಎಂದು ಕೆಲ ಶಿಕ್ಷಕರು ಅಸಹಾಯಕತೆ ವ್ಯಕ್ತಪಡಿಸಿದರು.
ಋಣಾತ್ಮಕ ಪರಿಣಾಮದ ಜತೆಗೆ ಅಧ್ಯಯನ: ‘ಕಲಿಕೆಯಲ್ಲಿ ಮುಂಚೂಣಿಯಲ್ಲಿದ್ದವರು ಆನ್‌ಲೈನ್‌ ಶಿಕ್ಷಣದಿಂದಾಗಿ ಮಧ್ಯಮ ಹಂತಕ್ಕೂ. ಮಧ್ಯಮ ಹಂತದಲ್ಲಿದ್ದವರು ಕೆಳಹಂತಕ್ಕೂ, ಕೆಳಹಂತದಲ್ಲಿ ಇದ್ದವರು ಮತ್ತಷ್ಟು ಕಳಪೆ ಹಂತಕ್ಕೆ ಬಂದಿದ್ದಾರೆ. 10ನೇ ತರಗತಿಯ ಮಕ್ಕಳಿಗೇ ಆದ್ಯತೆ ನೀಡಿ ತರಗತಿ ಮಾಡಿದ್ದರಿಂದ 8, 9ನೇ ತರಗತಿ ಮಕ್ಕಳ ಅಧ್ಯಯನದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಆನ್‌ಲೈನ್‌ ತರಗತಿಗಳಿಂದ ಹಲವು ಮಕ್ಕಳಿಗೆ ತಲೆನೋವು, ಕಣ್ಣುನೋವು ಕೂಡ ಕಾಣಿಸಿಕೊಂಡಿದೆ’ ಎಂದು ಶಿಕ್ಷಕ ಸೀತಾರಾಮ ಆತಂಕ ವ್ಯಕ್ತಪಡಿಸಿದರು.
‘ಆನ್‌ಲೈನ್‌ ತರಗತಿ ಇದ್ದಾಗ ಪ್ರತಿ ಸಂದರ್ಭದಲ್ಲೂ ಹಾಜರಾಗಲು ಸಾಧ್ಯವಾಗಿಲ್ಲ. ನಾನು ಪಕ್ಕದ ಮನೆಯವರ ಮೊಬೈಲ್‌ ಅವಲಂಬಿಸಿದ್ದೆ. ಪರೀಕ್ಷೆ ಬಗ್ಗೆ ಗೊಂದಲ ಇದ್ದುದರಿಂದ ಓದಿನ ಕಡೆಗೆ ಹೆಚ್ಚು ಗಮನ ನೀಡಿಲ್ಲ. ನಮ್ಮನ್ನೂ ಪಿಯು ವಿದ್ಯಾರ್ಥಿಗಳಂತೆ ಉತ್ತೀರ್ಣಗೊಳಿಸಬೇಕು. ಕೊರೊನಾ ಮೂರನೇ ಅಲೆ ಮಕ್ಕಳನ್ನು ಬಾಧಿಸುತ್ತದೆ ಎಂಬ ಸುದ್ದಿಯೂ ಭಯ ಉಂಟುಮಾಡಿದೆ’ ಎಂದು ಬನ್ನಿಕುಪ್ಪೆಯ ವಿದ್ಯಾರ್ಥಿ ಸುಮಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.
ಪೋಷಕರ ಜತೆ ಸಂವಹನ: ‘ಮುಖ್ಯಶಿಕ್ಷಕರು ಮತ್ತು ವಿಷಯ ಶಿಕ್ಷಕರೊಂದಿಗೆ ವರ್ಚುವಲ್‌ ಸಭೆ ನಡೆಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಮತ್ತು ಬದಲಾದ ಪರೀಕ್ಷಾ ಪದ್ಧತಿ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಫೋನ್‌ ಇನ್‌ ಕಾರ್ಯಕ್ರಮ, ಆಕಾಶವಾಣಿ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು, ಪೋಷಕರ ಜತೆಗೆ ಸಂವಹನ ನಡೆಸಲಾಗುತ್ತಿದೆ. ತಾಲ್ಲೂಕು ಹಂತದಲ್ಲೂ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗಿದೆ’ ಎಂದು ಡಿಡಿಪಿಐ ಡಾ.ಪಾಂಡುರಂಗ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್‌ 19ಗೆ ಸಂಬಂಧಿಸಿದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಟ್ಟು 6,700 ಸಿಬ್ಬಂದಿ ಪರೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದು, ಎಲ್ಲರಿಗೂ ಕೋವಿಡ್‌ ಲಸಿಕೆ ಹಾಕಲಾಗಿದೆ’ ಎಂದು ಧೈರ್ಯ ತುಂಬಿದರು.
ವಿದ್ಯಾರ್ಥಿಗಳ ಅನುಕೂಲದಂತೆ ತರಗತಿ: ‘ಮೊದಲ ಹಂತದಲ್ಲಿ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕ ಇಟ್ಟುಕೊಂಡು ಪರೀಕ್ಷೆ ಬಗ್ಗೆ ಮಾಹಿತಿ ನೀಡಿದ್ದೇವೆ. ಎರಡನೇ ಹಂತದಲ್ಲಿ ಕೋವಿಡ್‌ ನಿಯಮ ಪಾಲಿಸಿ 20 ವಿದ್ಯಾರ್ಥಿಗಳ ತಂಡಕ್ಕೆ ಪರೀಕ್ಷೆಯ ಹೊಸ ಮಾದರಿ, ಒಎಂಆರ್‌ ಶೀಟ್‌ ಬಗ್ಗೆ ಮಾಹಿತಿ ನೀಡಿದ್ದೇವೆ. ಒಎಂಆರ್ ಶೀಟ್‌ ನೀಡಿ ಆನ್‌ಲೈನ್‌ ಮೂಲಕವೇ ಪೂರ್ವಸಿದ್ಧತಾ ಪರೀಕ್ಷೆ ಮಾಡಿದ್ದೇವೆ’ ಎಂದು ಬೀರಿಹುಂಡಿ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಎಚ್‌.ಸಿ.ಮುರಳೀಧರ ತಿಳಿಸಿದರು.

Related Keywords

,High School ,Education Department ,Law Policy ,உயர் பள்ளி ,கல்வி துறை ,சட்டம் பாலிஸீ ,

© 2025 Vimarsana

comparemela.com © 2020. All Rights Reserved.