ಪ್ರಜಾವಾಣಿ ವಾರ್ತೆ Updated:
26 ಜುಲೈ 2021, 10:08 IST
ಅಕ್ಷರ ಗಾತ್ರ :ಆ |ಆ |ಆ
ಬಾಗೇಪಲ್ಲಿ: ತಾಲ್ಲೂಕಿನ ಪಾಳ್ಯಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಯ್ಯಗಾರಪಲ್ಲಿ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಕಾಲುವೆ ಕಾಮಗಾರಿಯನ್ನು ಜೆಸಿಬಿ ಯಂತ್ರಗಳಿಂದ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡರು ಆರೋಪಿಸಿದರು.
ಲಾಕ್‌ಡೌನ್‌ನಿಂದ ಕೃಷಿ ಕೂಲಿಕಾರರಿಗೆ ಕೂಲಿ ಕೆಲಸ ಇಲ್ಲ. ಕೆಲಸ ನೀಡಿ ಕೂಲಿ ಹಣ ನೀಡಬೇಕಾದ ಪಾಳ್ಯಕೆರೆ ಗ್ರಾಮ ಪಂಚಾಯಿತಿ ಪಿಡಿಒ, ಡೇಟಾ ಆಪರೇಟರ್, ಬಿಲ್ ಕಲೆಕ್ಟರ್, ಗುತ್ತಿಗೆದಾರರು ಶಾಮೀಲಾಗಿ ರಾತ್ರೋರಾತ್ರಿ ಜೆಸಿಬಿ ಯಂತ್ರಗಳಿಂದ ಕಾಲುವೆ ಕೆಲಸ ಮಾಡಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ನರಸಿಂಹಪ್ಪ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿಯ ಸಿಇಒಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೂಲಿಕಾರರಿಂದ ಮಾಡಿಸಬೇಕಾದ ಕಾಮಗಾರಿಗಳನ್ನು ಜೆಸಿಬಿ ಯಂತ್ರಗಳ ಮೂಲಕ ನಡೆಸಲಾಗುತ್ತಿದೆ. ಕೂಲಿಕಾರರಿಗೆ ವರದಾನವಾಗಬೇಕಿದ್ದ ನರೇಗಾ ಯೋಜನೆಯು ಭ್ರಷ್ಟರಿಂದಾಗಿ ಕೂಲಿಕಾರರ ಹೊಟ್ಟೆ ಮೇಲೆ ಹೊಡೆದಂತಾಗಿದೆ ಎಂದು ಗೊಲ್ಲಪಲ್ಲಿ ಮುಖಂಡ ಮಂಜುನಾಥ ಆರೋಪಿಸಿದರು.
ಹಸಿವು ನೀಗಿಸಬೇಕಾದ ನರೇಗಾ ಯೋಜನೆ ಭ್ರಷ್ಟರಿಂದಾಗಿ ಗುತ್ತಿಗೆದಾರರಿಗೆ ವರದಾನವಾಗಿ ಪರಿಣಮಿಸಿದೆ. ಅಕ್ರಮಗಳನ್ನು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎಂ.ವಿ ಲಕ್ಷ್ಮಿನರಸಿಂಹಪ್ಪ, ನರಸಿಂಹಪ್ಪ, ಜಯಂತ್, ಹೊಸಹುಡ್ಯ ಗೋಪಿ, ಕೋಟಪ್ಪ, ಎಲ್.ಎನ್.ನರಸಿಂಹಯ್ಯ, ಡಿಕೆ ರಮೇಶ್, ರವಿಕುಮಾರ್, ಬತ್ತಲವಾರಪಲ್ಲಿ ನರಸಿಂಹಪ್ಪ, ಗೊಲ್ಲಪಲ್ಲಿ ಮಂಜುನಾಥ, ಡಿವಿ ವೆಂಕಟೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು