Land slide in Rail line Train service cancelled
ಕುಲಶೇಖರ್ ಸುರಂಗ ಬಳಿ ಮತ್ತೆ ಕುಸಿದ ಮಣ್ಣು: ರೈಲುಗಳ ಸಂಚಾರ ಸ್ಥಗಿತ, ಮಾರ್ಗ ಬದಲು
ಪ್ರಜಾವಾಣಿ ವಾರ್ತೆ Updated:
17 ಜುಲೈ 2021, 12:14 IST
ಅಕ್ಷರ ಗಾತ್ರ :ಆ |ಆ |ಆ
ಮಂಗಳೂರು: ನಗರದ ಕುಲಶೇಖರ್–ಪಡೀಲ್ ನಿಲ್ದಾಣಗಳ ಮಧ್ಯೆ ಮತ್ತೊಮ್ಮೆ ಭೂಕುಸಿತ ಉಂಟಾಗಿದ್ದು, ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಎರಡು ವರ್ಷಗಳ ಹಿಂದೆ ಕುಸಿದ ಸ್ಥಳದಲ್ಲಿಯೇ ಮತ್ತೊಮ್ಮೆ ಭೂಕುಸಿತ ಉಂಟಾಗಿದೆ. ಹೀಗಾಗಿ ಮಂಗಳೂರಿನ ಮೂಲಕ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ರೈಲುಗಳ ಓಡಾಟ ಸ್ಥಗಿತಗೊಂಡಿದೆ.
ಮಂಗಳೂರು ಜಂಕ್ಷನ್–ತೋಕೂರು ನಿಲ್ದಾಣಗಳ ನಡುವಿನ ಈ ಮಾರ್ಗದಲ್ಲಿ ಶುಕ್ರವಾರ ಬೆಳಿಗ್ಗೆ 10.40ರ ವೇಳೆಗೆ ಭೂಕುಸಿದ ಉಂಟಾಗಿದೆ. ಎರಡು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಮಣ್ಣು ಕುಸಿದಿತ್ತು. ಆ ಸಂದರ್ಭದಲ್ಲಿ ಗುಡ್ಡದ ಮಣ್ಣು ಕುಸಿಯದಂತೆ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಒಂದು ಭಾಗದ ತಡೆಗೋಡೆ ಸಹಿತ ಭಾರಿ ಪ್ರಮಾಣದ ಮಣ್ಣು ರೈಲು ಹಳಿಗಳ ಮೇಲೆ ಬಿದ್ದಿದೆ.
ಸ್ಥಳಕ್ಕೆ ಪಾಲಕ್ಕಾಡ್ ವಿಭಾಗದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಳಿಯಲ್ಲಿ ಬಿದ್ದಿರುವ ಕಲ್ಲು– ಮಣ್ಣು ತೆರವು ಮಾಡುವ ಕಾರ್ಯ ನಡೆಯುತ್ತಿದೆ. ಮಳೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. ಮಣ್ಣು ತೆರವು ಮಾಡುತ್ತಿರುವಂತೆಯೇ ಮತ್ತೆ ನೀರಿನೊಂದಿಗೆ ಮಣ್ಣು ಹರಿದು ಬರುತ್ತಿದೆ. ಅಲ್ಲದೆ ಇನ್ನಷ್ಟು ಕಡೆಗಳಲ್ಲಿ ತಡೆಗೋಡೆ ಕುಸಿಯುವ ಹಂತದಲ್ಲಿದ್ದು, ಅದು ಹಳಿಗೆ ಬೀಳದಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ.
‘ಈಗಾಗಲೇ ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಆದಷ್ಟು ಶೀಘ್ರದಲ್ಲಿಯೇ ರೈಲುಗಳ ಓಡಾಟ ಆರಂಭಿಸಲಾಗುವುದು’ ಎಂದು ದಕ್ಷಿಣ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಕೆ. ಗೋಪಿನಾಥ್ ತಿಳಿಸಿದ್ದಾರೆ.
ರೈಲು ಸಂಚಾರ ಸ್ಥಗಿತ: ಮಂಗಳೂರು ಸೆಂಟ್ರಲ್–ಲೋಕಮಾನ್ಯ ತಿಲಕ (ರೈ.ಸಂ. 02620) ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ. ಕಾರವಾರ–ಕೆಎಸ್‌ಆರ್ ಬೆಂಗಳೂರು (ರೈ.ಸಂ. 06586) ದೈನಂದಿನ ರೈಲು ಸಂಚಾರವನ್ನೂ ಶುಕ್ರವಾರ ರದ್ದುಪಡಿಸಲಾಗಿತ್ತು.
‘ಮುಂಬೈ ಸಿಎಸ್‌ಎಂಟಿ–ಮಂಗಳೂರು ಜಂಕ್ಷನ್ (ರೈ.ಸಂ. 01133) ಎಕ್ಸ್‌ಪ್ರೆಸ್ ವಿಶೇಷ ರೈಲು ಸುರತ್ಕಲ್ ನಿಲ್ದಾಣದವರೆಗೆ ಮಾತ್ರ ಸಂಚರಿಸಿದೆ. ಮಂಗಳೂರು ಜಂಕ್ಷನ್–ಮುಂಬೈ ಸಿಎಸ್‌ಎಂಟಿ (ರೈ.ಸಂ. 01134) ರೈಲು, ಶುಕ್ರವಾರ ಸಂಜೆ 5.18ಕ್ಕೆ ಮಂಗಳೂರು ಜಂಕ್ಷನ್ ಬದಲು ಸುರತ್ಕಲ್ ನಿಲ್ದಾಣದಿಂದ ಹೊರಟಿದೆ. ಈ ರೈಲಿನ ಪ್ರಯಾಣಿಕರಿಗೆ ಮಂಗಳೂರು ಜಂಕ್ಷನ್‌ನಿಂದ ಸುರತ್ಕಲ್‌ವರೆಗೆ ಬಸ್‌ನಲ್ಲಿ ಕರೆದೊಯ್ದು ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ’ ಎಂದು ಕೊಂಕಣ ರೈಲ್ವೆಯ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ದಾದರ್–ತಿರುನಲ್ವೇಲಿ (ರೈ.ಸಂ. 06071) ಸಾಪ್ತಾಹಿಕ ರೈಲನ್ನು ಉಡುಪಿ ಮತ್ತು ತೋಕೂರು ನಿಲ್ದಾಣಗಳ ಮಧ್ಯೆ ನಿಲುಗಡೆ ಮಾಡಲಾಗಿತ್ತು. ವಿರಾವಲ್–ತಿರುವನಂತಪುರ ಸೆಂಟ್ರಲ್ (ರೈ.ಸಂ. 06333) ಸಾಪ್ತಾಹಿಕ ರೈಲನ್ನು ಶುಕ್ರವಾರ ಕುಮಟಾ ಮತ್ತು ತೋಕೂರು ನಿಲ್ದಾಣಗಳ ನಡುವೆ ನಿಲುಗಡೆ ಮಾಡಲಾಗಿತ್ತು.
ಮಾರ್ಗ ಬದಲಾವಣೆ: ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಕೋಯಿಕ್ಕೋಡ್, ಮಂಗಳೂರು ಜಂಕ್ಷನ್, ಮಡಗಾಂ, ಪನ್ವೇಲ್, ಕಲ್ಯಾಣ ಮೂಲಕ ಸಂಚರಿಸಬೇಕಿದ್ದ ಎರ್ನಾಕುಳಂ ಜಂಕ್ಷನ್–ನಿಜಾಮುದ್ದೀನ್ (ರೈ.ಸಂ. 02617) ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ಶೋರನೂರ್, ಪಾಲಕ್ಕಾಡ್, ಈರೋಡ್, ಸೇಲಂ, ಜೋಲಾರಪೇಟೆ, ರೇಣಿಗುಂಟಾ, ಇಟಾರ್ಸಿ ಮೂಲಕ ಸಂಚರಿಸಿದೆ.
ಕೂಚುವೇಲಿ–ಯೋಗನಗರಿ (ರೈ.ಸಂ. 06097) ಋಷಿಕೇಶ್ ಎಕ್ಸ್‌ಪ್ರೆಸ್ ರೈಲು, ಪಡೀಲ್, ಹಾಸನ, ಮಡಗಾಂ ಮೂಲಕ ಸಂಚರಿಸಿದ್ದು, ನಿಜಾಮುದ್ದೀನ್–ಎರ್ನಾಕುಳಂ ಎಕ್ಸ್‌ಪ್ರೆಸ್ (ರೈ.ಸಂ. 02618) ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲು ಮಡಗಾಂ, ಹುಬ್ಬಳ್ಳಿ, ಹಾಸನದ ಮೂಲಕ ಶನಿವಾರ ಬೆಳಿಗ್ಗೆ ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ಬರಲಿದೆ.