ನಗರಸಭೆ ಸೂಪರ್ ಸೀಡ್‌ಗೆ ಆಗ್ರಹ
ಕೆಜಿಎಫ್: ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ; ವಾಟಾಳ್ ನಾಗರಾಜ್ ಬಂಧನ
ಪ್ರಜಾವಾಣಿ ವಾರ್ತೆ Updated:
23 ಜುಲೈ 2021, 10:15 IST
ಅಕ್ಷರ ಗಾತ್ರ :ಆ |ಆ |ಆ
ಕೋಲಾರ: ಕೆಜಿಎಫ್ ನಗರದಲ್ಲಿ ತಮಿಳು ನಾಮಫಲಕ ತೆರವುಗೊಳಿಸುವುದು ಸೇರಿದಂತೆ ನಗರಸಭೆಯನ್ನು ಸೂಪರ್ ಸೀಡ್ ಮಾಡುವಂತೆ ಆಗ್ರಹಿಸಿ ನಗರ ಹೊರವಲಯದ ಜಿಲ್ಲಾಡಳಿತ ಭವನದ ಎದುರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸೇರಿದಂತೆ ಮುಖಂಡರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಕೆಜಿಎಫ್ ನಗರಸಭೆ ಆಡಳಿತದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಅಲ್ಲಿನ ತಮಿಳು ನಾಮಫಲಕಗಳನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ವಾಟಾಳ್ ನಾಗರಾಜ್ ಮಾತನಾಡಿ, ಈ ಚಳವಳಿ ಇಲ್ಲಿಗೆ ನಿಲ್ಲುವುದಿಲ್ಲ. ಈ ಭಾಗದ ರಾಜಕಾರಣಿಗಳಿಗೆ ಕಣ್ಣು, ಕಿವಿ ಇಲ್ಲ. ಕೆಜಿಎಫ್ ಕನ್ನಡಿಗರ ಗಂಡುಮೆಟ್ಟಿದ ನಾಡು. ಚುನಾವಣೆಯಲ್ಲಿ ಓಟಿಗೋಸ್ಕರ ನಾಡನ್ನು ಮಾರಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳು ಮೊದಲು ರಾಜ್ಯ ನೀತಿ, ಭಾಷಾ ನೀತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಓಟಿಗೋಸ್ಕರ ರಾಜಕಾರಣ ಮಾಡಬಾರದು. ತಮಿಳು ಸಾಮ್ರಾಜ್ಯ ನಿರ್ಮಾಣವಾಗಲು ರಾಜಕಾರಣಿಗಳೇ ಕಾರಣ ಎಂದು ದೂರಿದರು.
ನಗರಸಭೆಯಲ್ಲಿ ಸದಸ್ಯರಾಗಿ ಆಯ್ಕೆಯಾಗಿರುವ ಎಲ್ಲರೂ ತಮಿಳರು. ಇದು ಬೇಕಾ, ಯಾಕೆ ಇಟ್ಟುಕೊಂಡಿದ್ದರಿ. ನಿಮಗೆ ಕನ್ನಡದ ಬಗ್ಗೆ ಅಭಿಮಾನ, ಪ್ರಾಮಾಣಿಕತೆಯಿದ್ದರೆ ಕೂಡಲೇ ನಗರಸಭೆಯನ್ನು ರದ್ದುಪಡಿಸಿ ತಮಿಳರ ಬದಲು ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಕೆಜಿಎಫ್ ಮುತ್ತಿಗೆಗೆ ಮುನ್ನ ನಾಮಫಲಕ ತೆಗೆಸಬೇಕು. ಇದು ತಮಿಳುನಾಡು ಅಲ್ಲ ಕರ್ನಾಟಕ. ಅಧಿಕಾರಿಗಳ ಗೌರವದ ಪ್ರಶ್ನೆಯಾಗಿದ್ದು, ಕೂಡಲೇ ತೆರವುಗೊಳಿಸಬೇಕು. ನಾವಂತೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೆಜಿಎಫ್‍ನಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯ ತಿಳಿಯಬೇಕು. ಅದು ಬಿಟ್ಟು ನಮ್ಮನ್ನು ಎದುರಿಸಬೇಡಿ. ನಾವು ಕನ್ನಡದವರು. ಕೆಜಿಎಫ್ ಕನ್ನಡಮಯವಾಗಲೇ ಬೇಕು. ಕನ್ನಡ ನಾಮಫಲಕ ಹಾಕುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಜು. 26ರಂದು ರಾಜಭವನ ಮುತ್ತಿಗೆ ಹಾಕಲಾಗುವುದು. ಜಿಲ್ಲೆಯ ಎಲ್ಲ ಕನ್ನಡಪರ ಸಂಘಟನೆಗಳು ಬೆಂಗಳೂರಿನ ರಾಜಭವನಕ್ಕೆ ಅಂದು ಬರುತ್ತವೆ. ನಂತರ ಆ. 7ರಂದು ಕೆಜಿಎಫ್‍ಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
‘ಈ ಹಿಂದೆ ರೈಲಿಗೆ ಹೋರಾಟ ಮಾಡಿ ಅದನ್ನು ಉಳಿಸಿದ್ದೇನೆ. ಕೆಜಿಎಫ್ ಕರ್ನಾಟಕಕ್ಕೆ ಸೇರಿದ್ದು, ಕನ್ನಡ ಉಳಿಯುವ ಕೆಲಸವಾಗಬೇಕು. ಕನ್ನಡ ಬಿಟ್ಟು ಬೇರೆ ನಾಮಫಲಕ ಇರಬಾರದು’ ಎಂದು ಎಚ್ಚರಿಕೆ ನೀಡಿದರು.
ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರಾದ ಜಯದೇವಪ್ರಸನ್ನ, ಕನ್ನಡಮಿತ್ರ ವೆಂಕಟಪ್ಪ, ರೈತ ಸಂಘದ ರಾಮುಶಿವಣ್ಣ, ಜಿ. ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.