Entrepreneurs need government assistance says dk shivakumar
ಉದ್ದಿಮೆದಾರರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಉದ್ಯಮಿಗಳಿಗೆ ಸರ್ಕಾರದ ಸಹಾಯ ಅಗತ್ಯ
ಪ್ರಜಾವಾಣಿ ವಾರ್ತೆ Updated:
08 ಜುಲೈ 2021, 09:35 IST
ಅಕ್ಷರ ಗಾತ್ರ :ಆ |ಆ |ಆ
ಕುಂದಾಪುರ: ‘ಉದ್ಯೋಗ ಸೃಷ್ಟಿ ಮಾಡುವ ಉದ್ಯಮಿಗಳಿಗೆ ಸರ್ಕಾರಗಳು ಸಹಾಯ ಹಸ್ತ ನೀಡುವುದರಿಂದ ಉದ್ಯಮ ಹಾಗೂ ಅವಲಂಬಿತ ಕೆಲಸಗಾರರು ತೃಪ್ತಿಯಿಂದ ಇರಲು ಸಾಧ್ಯ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಇಲ್ಲಿಗೆ ಸಮೀಪದ ಹಂಗಳೂರಿನ ಸಹನಾ ಸಭಾಂಗಣದಲ್ಲಿ ಮಂಗಳವಾರ ಉದ್ದಿಮೆದಾರರ ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್‌ನಿಂದಾಗಿ ಜಗತ್ತು ಸಂಕಷ್ಟಕ್ಕೆ ಒಳಗಾಗಿದೆ. ಕೇಂದ್ರ ಘೋಷಣೆ ಮಾಡಿರುವ ಪ್ಯಾಕೇಜ್ ಹಾಗೂ ಆರ್ಥಿಕ ಸಹಾಯಗಳು ತಲುಪಬೇಕಾದವರಿಗೆ ಇನ್ನೂ ತಲುಪಿಲ್ಲ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಆರ್ಥಿಕ ರಿಯಾಯಿತಿಯನ್ನು ನೀಡಲು ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿವೆ ಎಂದು ಹೇಳಿದರು.
ಕೆಲಸವಿಲ್ಲದೆ, ವ್ಯವಹಾರವಿಲ್ಲದೆ ತಿಂಗಳುಗಳ ಕಾಲ ಮುಚ್ಚಿರುವ ಕೈಗಾರಿಕೆ ಹಾಗೂ ಉದ್ದಿಮೆಗಳ ಕಟ್ಟಡ ತೆರಿಗೆಯಲ್ಲಿಯೂ ರಿಯಾ ಯಿತಿ ನೀಡಿಲ್ಲ. ದೊಡ್ಡ ದೊಡ್ಡ ಉದ್ದಿಮೆದಾರರು ಹೇಗಾದರೂ ಈ ಹೊರೆ ತಾಳಿಕೊಳ್ಳುತ್ತಾರೆ. ಆದರೆ ಸಣ್ಣ ಉದ್ದಿಮೆದಾರರ ಕಷ್ಟ ಹೇಳಿಕೊಳ್ಳಲು ಆಗುತ್ತಿಲ್ಲ ಎಂದು ಅವರು
ಹೇಳಿದರು.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತೈಲಗಳ ಬೆಲೆಯಿಂದಾಗಿ ಪರೋಕ್ಷವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೆ ಏರುತ್ತಿವೆ. ಅದಿರು ಗಣಿಗಾರಿಕೆಗೆ ನಿರ್ಬಂಧ ಹಾಕಿರುವುದರಿಂದ, ವಿದೇಶದ ಕಬ್ಬಿಣ ಅವಲಂಭಿಸಬೇಕಾಗಿದೆ. ಕಬ್ಬಿಣದ ಬೆಲೆ ಏರಿಕೆ ವ್ಯಾಪಕವಾಗಿದೆ. ನಿರ್ಮಾಣ ಕ್ಷೇತ್ರ ಸಂಪೂರ್ಣ ಕುಸಿದು ಬಿದ್ದಿದೆ. ನೋಟು ರದ್ದತಿಯಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ದೇಶದ ಉದ್ದಿಮೆದಾರರನ್ನು ಸಾಲದ ಕೂಪಕ್ಕೆ ತಳ್ಳಿ, ವಿದೇಶಿ ಉದ್ದಿಮೆದಾರರಿಗೆ ರತ್ನಕಂಬಳಿ ಹಾಕಿ ಸ್ವಾಗತಿಸಲಾಗುತ್ತಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ಅಭಿಪ್ರಾಯ ಹಂಚಿಕೊಂಡ ಉದ್ಯಮಿ ಕೌಶಿಕ್ ಶೆಟ್ಟಿ ಅವರು ದೇಶದಲ್ಲಿ ಹೆಚ್ಚುತ್ತಿರುವ ಕಬ್ಬಿಣದ ಬೆಲೆ ಏರಿಕೆಗೆ ವಿದೇಶದ ಕಡೆ ಬೊಟ್ಟು ಮಾಡುತ್ತಾರೆ. ಡೀಸೆಲ್ ಹಾಗೂ ಪೆಟ್ರೋಲ್ ಏರಿಕೆಯಿಂದಾಗಿ ಸರಕು ಸಾಗಾಟದ ಬೆಲೆ ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ದಿಮೆ ಹೊಂದಿದವರು ಹಾಗೂ ನಗರ ಪ್ರದೇಶದ ಮಾರುಕಟ್ಟೆ ಅವಲಂಬಿನೆ ಇರುವವರಿಗೆ ಇದರಿಂದಾಗಿ ದೊಡ್ಡ ಹೊಡೆತ ಬಿದ್ದಿದೆ ಎಂದರು.
ಮಾಜಿ ಸಚಿವ ವಿನಯ ಕುಮಾರ ಸೊರಕೆ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಜೆ.ಡಿ.ನಾಯ್ಕ್ ಭಟ್ಕಳ್, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ ಕುಮಾರ ಕೊಡವೂರು, ಕೆಪಿಸಿಸಿ ಪದಾಧಿಕಾರಿ ರಘುನಂದನ್, ಯುವ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಮೊಹಮ್ಮದ್ ಹ್ಯಾರಿಸ್ ನಲಪಾಡ್, ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಇದ್ದರು.
ಸಹನಾ ಗ್ರೂಪ್ಸ್ ಪ್ರವರ್ತಕ ಸುರೇಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾ ಡಿದರು.
ಸಾಹೀಲ್ ರೈ ಮಂಗಳೂರು ನಿರೂಪಿಸಿದರು.
‘ ಕಾಂಗ್ರೆಸ್ ಆಡಳಿತದಲ್ಲಿ ಪರಿಹಾರ’
ಯುಪಿಎ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಅಂದಿನ ಪ್ರಧಾನಿ ಮನ್‌ಮೋಹನ್ ಸಿಂಗ್ ಸ್ವಷ್ಟ ಆರ್ಥಿಕ ನೀತಿ ಜಾರಿಗೆ ತಂದಿದ್ದರು. ಇದೀಗ ಆ ವಿಷಯ ಪ್ರಾಸ್ತಾಪಿಸಿದರೆ, ಅದು ರಾಜಕೀಯವಾಗುತ್ತದೆ. ಆದರೆ, ದಾಖಲೆ ಹಾಗೂ ಚರಿತ್ರೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ದೇಶದ ಸಣ್ಣ ಸಣ್ಣ ಉದ್ದಿಮೆದಾರರಿಗೆ ಎದುರಾಗಿರುವ ಸಂಕಷ್ಟ ಹಾಗೂ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.