Apple cultivation in Chitradurga
ಚಿತ್ರದುರ್ಗ ತಾಲ್ಲೂಕಿನ ಗೊಡಬನಾಳು ಗ್ರಾಮದ ಸಹೋದರರ ಕೃಷಿ ಸಾಹಸ
ಬಯಲುಸೀಮೆಯಲ್ಲಿ ಗರಿಗೆದರಿದ ಸೇಬು ಕೃಷಿ
ಜಿ.ಬಿ. ನಾಗರಾಜ್ Updated:
21 ಜುಲೈ 2021, 10:44 IST
ಅಕ್ಷರ ಗಾತ್ರ :ಆ |ಆ |ಆ
ಚಿತ್ರದುರ್ಗ: ಕಾಶ್ಮೀರ, ಹಿಮಾಚಲ ಪ್ರದೇಶದಿಂದ ಬುಟ್ಟಿಯಲ್ಲಿ ಬರುವ ಸೇಬು ಶೀತ ಪ್ರದೇಶದಲ್ಲಷ್ಟೇ ಬೆಳೆಯುತ್ತದೆ ಎಂಬುದು ರೈತರ ನಂಬಿಕೆ. ಆದರೆ, ಬಯಲುನಾಡಿನಲ್ಲೂ ಸೇಬು ಬೆಳೆಯಬಹುದು ಎಂಬುದನ್ನು ಚಿತ್ರದುರ್ಗ ತಾಲ್ಲೂಕಿನ ಗೊಡಬನಾಳು ಗ್ರಾಮದ ಸಹೋದರರು ನಿರೂಪಿಸಿದ್ದಾರೆ.
ಗೊಡಬನಾಳು ಗ್ರಾಮದ ಜ್ಯೋತಿಪ್ರಕಾಶ್ ಹಾಗೂ ಸುನೀಲ್ ಸಹೋದರರು ಸೇಬು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಚ್ಚರಿ ಮೂಡಿಸುವಂತಹ ಫಲ ಮೇ ತಿಂಗಳಲ್ಲಿ ಸಿಕ್ಕಿದೆ. ಇದರಿಂದ ಪ್ರೇರಣೆಗೊಂಡ ಅನೇಕರು ಸೇಬು ಕೃಷಿಗೆ ಮುಂದಾಗಿದ್ದಾರೆ. ದಾಳಿಂಬೆ ಬೆಳೆದು ರಾಜ್ಯದ ಗಮನ ಸೆಳೆದಿದ್ದ ಚಿತ್ರದುರ್ಗ ಈಗ ಸೇಬು ಕೃಷಿಯ ಹೊಸ ಪ್ರಯೋಗಕ್ಕೆ ಸಜ್ಜಾಗುತ್ತಿದೆ.
ಅಡಿಕೆಯಂತಹ ತೋಟಗಾರಿಕೆ ಬೆಳೆಗಳಿಗೆ ರೈತರು ಮಾರುಹೋಗುತ್ತಿರುವುದನ್ನು ಗಮನಿಸಿದ ಸಹೋದರರಿಗೆ ವಿಭಿನ್ನ ಪ್ರಯೋಗಕ್ಕೆ ಕೈಹಾಕುವ ಆಲೋಚನೆ ಮೊಳೆತಿದೆ. ಸೇಬು ಬೆಳೆಯುವ ನಿಟ್ಟಿನಲ್ಲಿ ಅಧ್ಯಯನ ಮಾಡಿದ್ದಾರೆ. 2019ರ ಡಿಸೆಂಬರ್‌ನಲ್ಲಿ ಹಿಮಾಚಲಪ್ರದೇಶದಿಂದ ಸೇಬು ಸಸಿಯ ಗೂಟಿಗಳನ್ನು ತರಿಸಿ ನಾಟಿ ಮಾಡಿದ್ದಾರೆ. ಒಂದೂವರೆ ವರ್ಷದ ಈ ಸೇಬು ಗಿಡ ಹತ್ತು ಅಡಿಯಷ್ಟು ಎತ್ತರ ಬೆಳೆದಿದ್ದು ರೈತರಲ್ಲಿ ಭರವಸೆ ಮೂಡಿಸಿದೆ.
‘ಸೇಬು ಬೆಳೆಯುವ ಬಗ್ಗೆ ಸಹೋದರ ಜ್ಯೋತಿಪ್ರಕಾಶ್ ಗಮನ ಸೆಳೆದರು. ಹಿಮಾಚಲಪ್ರದೇಶದಿಂದ ಒಂದು ಸಾವಿರ ಸೇಬು ಸಸಿಯ ಗೂಟಿಗಳನ್ನು ತರಿಸಿ ಮನೆಯ ಮುಂಭಾಗದಲ್ಲಿಯೇ ಪ್ಯಾಕೇಟ್ ಮಾಡಿದೆವು. ತಿಂಗಳ ಬಳಿಕ ಚಿಗುರು ಕಾಣಿಸಿಕೊಂಡಿತು. ನಾನು 200 ಹಾಗೂ ಸಹೋದರ 300 ಸಸಿಗಳನ್ನು ನಾಟಿ ಮಾಡಿದ್ದೇವೆ. ಮುಂದಿನ ವರ್ಷದಿಂದ ಫಲ ಸಿಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಸುನೀಲ್.
ಹೊಸ ತಳಿಯ ಸೇಬು ಇದಾಗಿದ್ದು, 48 ಡಿಗ್ರಿ ಉಷ್ಣಾಂಶ ಇರುವ ಪ್ರದೇಶದಲ್ಲಿಯೂ ಬೆಳೆಯುತ್ತದೆ. 12X12 ಅಡಿ ಅಂತರದಲ್ಲಿ ಗಿಡಗಳನ್ನು ನಾಟಿ ಮಾಡಲಾಗಿದೆ. ದಾಳಿಂಬೆಯಂತೆ ಈ ಗಿಡಗಳನ್ನು ಸರಿಯಾದ ಸಮಯಕ್ಕೆ ಆರೈಕೆ ಮಾಡಬೇಕು. ಬೇಕಾದ ಆಕಾರ, ಎತ್ತರಕ್ಕೆ ಗಿಡಗಳನ್ನು ಬೆಳೆಸಿಕೊಳ್ಳಬಹುದು. ಸೇಬು ಸಸಿಗಳು ಇನ್ನೂ ಬೆಳವಣಿಗೆ ಹಂತದಲ್ಲಿರುವುದರಿಂದ ಸಾಲಿನ ಮಧ್ಯದಲ್ಲಿ ಬಾಳೆ ಹಾಕಲಾಗಿದೆ.
ಆಳೆತ್ತರಕ್ಕೆ ಬೆಳೆದ ಸಸಿಯನ್ನು ಟ್ರಿಮ್ಮಿಂಗ್ ಮಾಡಲಾಗಿದೆ. ಆರಂಭದ ಎರಡು ವರ್ಷ ಹಣ್ಣು ಬೆಳೆಯುವವರೆಗೆ ಬಿಡುವಂತಿಲ್ಲ. ಹೂಗಳನ್ನು ಕಿತ್ತುಹಾಕಿದರೆ ಗಿಡಗಳ ಆಯಸ್ಸು ಹೆಚ್ಚುತ್ತದೆ. ಆದರೆ, ಜ್ಯೋತಿಪ್ರಕಾಶ್ ಸಹೋದರರು ಕುತೂಹಲಕ್ಕೆ ಕೆಲ ಗಿಡಗಳ ಹೂಗಳನ್ನು ಕಿತ್ತುಹಾಕಿರಲಿಲ್ಲ. ಗಿಡವೊಂದಕ್ಕೆ ಸುಮಾರು 50 ಹಣ್ಣುಗಳು ಸಿಕ್ಕಿದ್ದು, ಕಾಶ್ಮೀರದ ಸೇಬುವಿಗೆ ಸಾಟಿಯಾಗುವ ಆಕಾರ ಪಡೆದಿವೆ.
ಕಾಶ್ಮೀರ, ಹಿಮಾಚಲಪ್ರದೇಶದ ಸೇಬು ಹಂಗಾಮು ಮುಗಿದ ಬಳಿಕ ಈ ಸೇಬು ಫಲ ನೀಡುತ್ತದೆ. ಸಾಮಾನ್ಯವಾಗಿ ಫೆಬ್ರುವರಿಯಿಂದ ಮೇ ತಿಂಗಳಲ್ಲಿ ಈ ಹಣ್ಣು ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಇದರಿಂದ ಇಲ್ಲಿನ ರೈತರಿಗೆ ಬೆಲೆಯೂ ಸಿಗಲಿದೆ ಎಂಬುದು ರೈತರ ಬಲವಾದ ನಂಬಿಕೆ. ಇದು ಇತರ ರೈತರಲ್ಲಿಯೂ ಆಸಕ್ತಿ ಮೂಡಿಸಿದ್ದು, ಸೇಬು ಕೃಷಿ ಮಾಡುವ ಕುತೂಹಲದಿಂದ ಅನೇಕರು ತೋಟಕ್ಕೆ ಭೇಟಿ ನೀಡುತ್ತಿದ್ದಾರೆ.
‘ಸೇಬು ಸಸಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದೇವೆ. ಮೆಣಸಿನ ಗಿಡಕ್ಕೆ ಬರುವ ಮುರುಟು ರೋಗ ಹಾಗೂ ಅವರೆಯಲ್ಲಿ ಕಾಣಿಸಿಕೊಳ್ಳುವ ಹಸಿರು ಹುಳುಗಳ ಬಾಧೆ ತಟ್ಟಿತ್ತು. ಹೀಗಾಗಿ, ಎರಡು ಬಾರಿ ಕೀಟನಾಶಕ ಸಿಂಪಡಿಸಲಾಗಿದೆ. ಮೂಲ ಬೇರಿಗೆ ಸೇಬು ಗಿಡದ ಗೂಟಿ ಕಸಿ ಮಾಡಿರುವುದರಿಂದ ಇಲ್ಲಿನ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಂಡಿವೆ. ಗಿಡಗಳು ಸೋಂಪಾಗಿ ಬೆಳೆದಿವೆ’ ಎನ್ನುತ್ತಾರೆ ಸುನೀಲ್ .
ಎರಡು ವರ್ಷಗಳವರೆಗೆ ಸೇಬು ಕೈಸೇರುವುದಿಲ್ಲ. ಹೀಗಾಗಿ, ಬಾಳೆ ಬೆಳೆಯುತ್ತಿದ್ದೇವೆ. ಮುಂದಿನ ವರ್ಷ ಸೇಬು ಫಲ ಕೈಸೇರುವ ಸಾಧ್ಯತೆ ಇದೆ. ತೋಟಗಾರಿಕೆಯ ಇತರ ಬೆಳೆಗಳಿಗಿಂತ ಇದು ಉತ್ತಮ.
- ಸುನೀಲ್, ರೈತ, ಗೊಡಬನಾಳು
ಗೊಡಬನಾಳು ಗ್ರಾಮದಲ್ಲಿ ಬೆಳೆದ ಸೇಬು ತೋಟ ಪರಿಶೀಲಿಸಿದ್ದೇನೆ. ಬಯಲುಸೀಮೆಯ ವಾತಾವರಣದಲ್ಲಿಯೂ ಸೇಬು ಬೆಳೆಯಬಹುದು. ಬಣ್ಣ, ರುಚಿಯಲ್ಲಿ ವ್ಯತ್ಯಾಸ ಆಗದು.
- ಡಾ.ಸವಿತಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ
ತಾಜಾ ಮಾಹಿತಿ ಪಡೆಯಲು